ಫುಪ್ಫುಸದ ರೋಗಗಳು

	ಪುಪ್ಪುಸಕ್ಕೆ ಸೀಮಿತವಾದ ಅನಾರೋಗ್ಯ ಪರಿಸ್ಥಿತಿಗಳು. ಸೋಂಕುಗಳಿಂದ ಇಲ್ಲವೆ ಇನ್ನಾವುದಾದರೂ ಕಾರಣಗಳಿಂದ ಪುಪ್ಛುಸದ ಉರಿಯೂತ ಉಂಟಾದಾಗ ಫುಪ್ಛುಸವನ್ನು ಮೇಲು ಹೊದ್ದಿಕೆಯಂತೆ ಸಂಪೂರ್ಣವಾಗಿ ಆವರಿಸಿರುವ ಪ್ಲೂರ ಎಂಬ ಪೊರೆಯೂ ರೋಗಪ್ರಕ್ರಿಯೆಗೆ ಈಡಾಗುವುದು ಅಪರೂಪವಲ್ಲ. ಶ್ವಾಸಮಂಡಲದ ರೋಗಗಳಲ್ಲಿ ಪುಪ್ಛುಸದ ರೋಗಗಳೂ ಸೇರಿರುವುದರಿಂದ ಪ್ರಸಕ್ತಲೇಖನದಲ್ಲಿ ವ್ಯಾಪಕವಾಗಿ ಮೊದಲಿನವನ್ನು ಪರಿಶೀಲಿಸಲಾಗುವುದು.

	ಶ್ವಾಸಮಂಡಲದ ಅಂಗಗಳಾದ ಮೂಗು, ಗಂಟಲು, ಧ್ವನಿಪೆಟ್ಟಿಗೆ, ಶ್ವಾಸನಾಳ, ಶ್ವಸನಿಗಳು ಮತ್ತು ಪುಪ್ಛುಸಗಳನ್ನು ವ್ಯಾಪಿಸುವ ರೋಗಗಳೇ ಶ್ವಾಸಮಂಡಲದ ರೋಗಗಳು. ಈ ಅಂಗಗಳಿಗೆ ಹೊರಗಿನ ವಾಯುವಿನೊಡನೆ ನೇರಸಂಪರ್ಕವಿರುವುದರಿಂದ ಅದರಲ್ಲಿರುವ ರೋಗಾಣುಗಳು ಇವುಗಳಲ್ಲಿ ಸೋಂಕನ್ನು ಉಂಟುಮಾಡುವುದು ಸಾಮಾನ್ಯ, ಅಲ್ಲದೆ ಬೇರೆ ಕಾರಣಗಳಿಂದ ಇವು ಇತರ ರೋಗಗಳಿಗೂ ಈಡಾಗುತ್ತವೆ. ಹೊರವಾಯುವಿನ ಉಸಿರಾಟದಿಂದ ಅಂಟಬಹುದಾದ ಸೋಂಕುಗಳ ವಿರುದ್ಧ ಶ್ವಾಸನಾಳ ಹಾಗೂ ಶ್ವಸನಿಗಳ ಲೋಳೆಕೋಶಗಳೂ ದುಗ್ಧ ರಸಾಂಗಾಂಶಗಳೂ ಫುಪ್ಛುಸಗಳಲ್ಲಿಯ ಏಕಾಣುಭಕ್ಷಕ ಕೋಶಗಳೂ ಶ್ವಾಸಾಂಗಗಳನ್ನು ನೈಸರ್ಗಿಕವಾಗಿ ರಕ್ಷಿಸುತ್ತವೆ. ಶ್ವಾಸಮಂಡಲದ ರೋಗಿಗಳಲ್ಲಿ ಕೆಮ್ಮು, ಕಫ, ರಕ್ತ ಕಫ, ಎದೆನೋವು, ಮೇಲುಸಿರು ಇವೇ ಅಲ್ಲದೆ ಕೈಬೆರಳುಗಳು ನೀಲಿಗಟ್ಟುವುದು, ಕೆಲವು ಸಂದರ್ಭಗಳಲ್ಲಿ ಕೈಕಾಲುಬೆರಳುಗಳ ತುದಿಗಳು ಗುಂಡಾಗಿ ಊದಿಕೊಳ್ಳುವುದು ರಕ್ತದಲ್ಲಿ ಆಕ್ಸಿಜನ್ನಿನ ಕೊರತೆ ಹಾಗೂ ಇಂಗಾಲ ಡೈ ಆಕ್ಸೈಡಿನ ಆಧಿಕ್ಯ ಇವೂ ಸಾಮಾನ್ಯವಾಗಿ ಕಂಡುಬರುತ್ತವೆ. ಕೆಮ್ಮು ಸಾಮಾನ್ಯವಾಗಿ ಇಲ್ಲವೆ ಉಗ್ರವಾಗಿ ಇರಬಹುದು. ಕೆಮ್ಮಿದಾಗ ಕಫ ಬರಬಹುದು ಇಲ್ಲವೇ ಒಣಕೆಮ್ಮು ಇರಬಹುದು. ಕೆಮ್ಮಿದಾಗ ಎದೆನೋವು ಗಂಟಲು ಉರಿ ಇವೂ ಕಂಡುಬರಬಹುದು. ಪ್ಲೂರಪೊರೆಯ ಉರಿಯೂತವಿದ್ದಾಗ (ಇದಕ್ಕೆ ಪ್ಲೂರಿಸಿ ಎಂದು ಹೆಸರು) ನೋವಿನಿಂದ ಸರಿಯಾಗಿ ಕೆಮ್ಮುವುದಕ್ಕೆ ಆಗದೆ ಹೋಗಬಹುದು. ಪುಪ್ಛುಸದ ಏಡಿಗಂತಿ ಸ್ಥಿತಿಯಲ್ಲಿ ಕೆಮ್ಮು ಒಂದು ಲಕ್ಷಣವಾಗಿರಬಹದು. ಕ್ಷಯರೋಗದಲ್ಲಿ ಅದು ರೋಗ ಬೆಳೆದ ಲಕ್ಷಣವಾಗಿರುತ್ತದೆ. ಕಾಲಾನುಸಾರ ಕೆಮ್ಮು ಹೆಚ್ಚಾಗಬಹುದು. ಕೆಲವು ವೇಳೆಗಳಲ್ಲಿ ಮಲಗಿದ ಕೂಡಲೆ ಹೆಚ್ಚಾದರೆ ಇನ್ನು ಕೆಲವು ಸಂದರ್ಭಗಳಲ್ಲಿ ಬೆಳಗ್ಗೆ ಎದ್ದಾಗ ಹೆಚ್ಚಾಗುತ್ತದೆ. ವಾತಾವರಣದ ಉಷ್ಣತೆ ಮತ್ತು ದ್ರವಾಂಶಗಳು ಕೆಮ್ಮಿನ ಮೇಲೆ ತಮ್ಮ ಪ್ರಭಾವ ಬೀರುತ್ತವೆ. ಶ್ವಾಸಾಂಗಗಳ ಸೋಂಕಿರುವಾಗ ಕಫದಲ್ಲಿ ಕೀವು ಇರಬಹುದು. ಶ್ವಸನಿಗಳ ಕೂರಾದ ಇಲ್ಲವೆ ತಾತ್ಕಾಲಿಕವಾಗಿ ಉಲ್ಬಣಗೊಂಡಿರುವ ದೀರ್ಘಕಾಲಿಕ ಉರಿಯೂತದಲ್ಲಿ, ಪುಪ್ಛುಸದ ಏಕಾಣುಕೃತ ಉರಿಯೂತದಲ್ಲಿ ಶ್ವಸನಿಗಳ ಹಿಗ್ಗುರೋಗದಲ್ಲಿ (ಬ್ರಾಂಕಿಎಕ್ಟೇಸಿಸ್) ಹಾಗೂ ಪುಪ್ಛುಸದ ಕುರುಗಳಲ್ಲಿ (ಲಂಗ್ ಆಬ್‍ಸೆಸ್) ಕಫ ಈ ರೀತಿ ಇರುತ್ತದೆ. ಕೊನೆಯ ಎರಡು ರೋಗಗಳಲ್ಲಿ ಕಫ ದುರ್ವಾಸನೆಯಿಂದ ಕೂಡಿಯೂ ಇರುತ್ತದೆ. ಗೂರಲು ರೋಗದಲ್ಲಿ ಉಪರಿ ಸೋಂಕು (ಸೂಪರ್‍ಇಂಪೋಸ್ಡ್ ಇನ್‍ಫೆಕ್ಷನ್) ಉಂಟಾದಾಗ ಕಫ ಹೆಚ್ಚಾಗುತ್ತದೆ. ಕ್ಷಯರೋಗದ ಆದಿಭಾಗದಲ್ಲಿ ಕಫ ಲೋಳೆಯಾಗಿಯೂ ಅದು ಮುಂದುವರಿದಂತೆ, ಕೀವಿನಿಂದ ಕೂಡಿದುದಾಗಿಯೂ ಇರಬಹುದು. ಕಫದಲ್ಲಿ ರಕ್ತ ಸ್ವಲ್ಪವಾಗಿ ಇಲ್ಲವೇ ಹೆಚ್ಚಾಗಿಯೇ ಇರಬಹುದು. ರಕ್ತಸ್ರಾವವೇ ಆದಷ್ಟು ಇರುವಾಗ ರೋಗಿಯನ್ನು ಜರೂರಾಗಿ ಸವಿವರ ಪರೀಕ್ಷೆಗೆ ಒಳಪಡಿಸಬೇಕು. ಶ್ವಸನಿಗಳ ಕೂರು ಹಾಗೂ ದೀರ್ಘಕಾಲಿಕ ಉರಿಯೂತ, ಏಡಿಗಂತಿ, ಅಂಗಾಂಶ ಕೊಳೆತ, ಶ್ವಸನಿಗಳ ಹಿಗ್ಗುರೋಗ ಕ್ಷಯ ಮತ್ತು ಹೃದಯದಲ್ಲಿ ದ್ವಿದಳ ಕವಾಟಗಳ ನಡುವಿನ ಅವಕಾಶ ಕಿರಿದುಗೊಳ್ಳುವಿಕೆ (ಮೈಟ್ರಲ್ ಸ್ಟಿನೋಸಿಸ್) ಈ ಸ್ಥಿತಿಗಳಲ್ಲಿ ಕಫ ಕಂಡುಬರುತ್ತವೆ.

	ಎದೆಯಲ್ಲಿ ಬೇರೆಡೆ ಹುಣ್ಣಾದಾಗ ಇಲ್ಲವೆ ತರಚಿದಾಗ ಕಂಡುಬರುವಂಥ ನೋವು ಆಗುವುದುಂಟು. ಶ್ವಾಸನಾಳದ ಉರಿಯೂತದಲ್ಲಿ ನೋವು ಎದೆಯ ಮಧ್ಯೆ ಎದೆ ಮೂಳೆಯ ಹಿಂಬದಿಯಲ್ಲಿ ಕಂಡುಬರುತ್ತದೆ. ಈ ನೋವು ಕೆಮ್ಮಿದಾಗ ಹೆಚ್ಚಾಗುತ್ತದೆ. ಆದರೆ ದೀರ್ಘವಾಗಿ ಉಸಿರು ಎಳೆದುಕೊಂಡಾಗ ಅನುಭವಕ್ಕೆ ಬರುವುದಿಲ್ಲ. ಬಗಲು ಇಲ್ಲವೆ ಎದೆ ಭಾಗಗಳಲ್ಲಿ ಪ್ಲೂರಿಸಿ ಆದಾಗ ಎದೆಯ ಪಕ್ಕದಲ್ಲಿ ತೀಕ್ಷ್ಣವಾದ ಮತ್ತು ಇರಿಯುವಂತಿರುವ ನೋವು ಕಾಣಿಸಿಕೊಳ್ಳುತ್ತದೆ. ಕೆಮ್ಮಿದಾಗಲೂ ದೀರ್ಘವಾಗಿ ಉಸಿರೆಳೆದುಕೊಂಡಾಗಲೂ ಇದು ಹೆಚ್ಚಾಗುತ್ತದೆ. ವಪೆಪ್ರಾಂತ್ಯದಲ್ಲಿ ಪ್ಲೂರಿಸಿ ಆದಾಗ ನೋವು ಎದೆಯ ಮುಂದೆ ಮತ್ತು ಭುಜಾಗ್ರದಲ್ಲಿ ತಲೆದೋರುತ್ತದೆ. ಪ್ಲೂರದ ಒಳ ಮತ್ತು ಹೊರಪೊರೆಗಳ ಘರ್ಷಣೆಯಿಂದ ಉಂಟಾಗುವ ಉರಿ ವಿಶಿಷ್ಟ ಲಕ್ಷಣದ್ದು. ಎರಡು ಪೊರೆಗಳ ನಡುವೆ ದ್ರವಶೇಖರಣೆ ಆದಾಗ ಈ ಉರಿ ಕಡಿಮೆ ಆಗುತ್ತದೆ.

	ಉಸಿರಾಟದ ತೊಂದರೆ ಶ್ವಾಸಮಂಡಲದ ರೋಗಗಳಲ್ಲೂ ಹೃದ್ರೋಗಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಲಕ್ಷಣ. ವಾತಾವರಣ ಬದಲಾವಣೆಯಿಂದ ಆಕ್ಸಿಜನ್ ಪೂರೈಕೆ ತೃಪ್ತಿಕರವಾಗಿ ಇಲ್ಲದಿದ್ದರೆ ಆಗಲೂ ಇಂಥ ತೊಂದರೆ ಕಂಡುಬರುತ್ತದೆ. ಉಸಿರಾಡುವಾಗ ಪುುಪ್ಛುಸಗಳ ವಾಯುಕೋಶಗಳಿಗೆ ಸಾಕಷ್ಟು ವಾಯು ತಲುಪದಿದ್ದರೆ ಇಲ್ಲವೆ ಅನಿಲವಿನಿಮಯ ಕಷ್ಟಸಾಧ್ಯವಾಗಿದ್ದು ರಕ್ತ ತಾನು ಹೀರಬಹುದಾದಷ್ಟು ಆಕ್ಸಿಜನ್ನನ್ನು ಹೀರಿಕೊಳ್ಳಲಾಗದಿದ್ದರೆ ಮುಖ ಕೈಗಳು ನೀಲಿಗಟ್ಟುವುದು ಸ್ವಾಭಾವಿಕ. ಆಗ ರಕ್ತದಲ್ಲಿ ಇಂಗಾಲ ಡೈಆಕ್ಸೈಡಿನ ಮಟ್ಟ ಹೆಚ್ಚಾಗುತ್ತದೆ. ಪುಪ್ಛುಸದ ಏಡಿಗಂತಿ ಮತ್ತು ಕುರುಗಳು, ಶ್ವಸನಿಗಳ ಹಿಗ್ಗುರೋಗ, ಮತ್ತು ದೀರ್ಘಕಾಲಿಕವಾಗಿದ್ದು ಪ್ಲೂರದಲ್ಲಿ ಕೀವು ತುಂಬಿಕೊಳ್ಳವಂಥ ರೋಗಗಳು-ಇಂಥ ಸಂದರ್ಭದಲ್ಲಿ ಕೈಕಾಲುಬೆರಳುಗಳ ತುದಿಗಳು ಗುಂಡಾಗಿ ಊದಿಕೊಳ್ಳುತ್ತವೆ.

	ಶ್ವಾಸಮಂಡಲದ ರೋಗಗಳನ್ನು ಪತ್ತೆಮಾಡಲು ಅನೇಕ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ದೈಹಿಕ ಪರೀಕ್ಷೆಗಳ ಜೊತೆಗೆ ಸಾಧಾರಣ ಮತ್ತು ವಿಶೇಷ ಎಕ್ಸ್‍ಕಿರಣ ಪರೀಕ್ಷೆ, ಕಫ ಪರೀಕ್ಷೆ ಮತ್ತು ಇದರಲ್ಲಿ ಏಕಾಣುಗಳನ್ನು ಗುರುತಿಸುವಿಕೆ, ರಕ್ತಪರೀಕ್ಷೆ, ಟ್ಯುಬರ್‍ಕ್ಯುಲಿನ್ ಚುಚ್ಚುಮದ್ದಿನ ಪರೀಕ್ಷೆ, ಧ್ವನಿಪೆಟ್ಟಿಗೆ ಮತ್ತು ಶ್ವಾಸಮಾರ್ಗಗಳ ವೀಕ್ಷಣೆ ಮುಂತಾದ ಪರೀಕ್ಷೆಗಳನ್ನೆಲ್ಲ ಆವಶ್ಯಕತೆಗೆ ಅನುಸಾರವಾಗಿ ನಡೆಸಬೇಕು. ಈ ಕೆಳಗೆ ಶ್ವಾಸಮಂಡಲದ ಕೆಲವು ರೋಗಗಳನ್ನು ವಿವರಿಸಿದೆ.

	1 ನೆಗಡಿ: ಇದು ವೈರಸ್ಸುಗಳ ಸೋಂಕಿನಿಂದ ಉಂಟಾಗುವ ವ್ಯಾಧಿ. ಹಠಾತ್ತಾಗಿ ಪ್ರಾರಂಭವಾಗುತ್ತದೆ. ಮೂಗಿನೊಳಗೆ ಚಕ್ಕಲಗುಳಿ ಇಟ್ಟಂತಾಗಿ ಸೀನು ಬರುತ್ತದೆ. ಗಂಟಲು ಒಣಗುವುದು, ಗಂಟಲು ನೋವು, ತಲೆಭಾರ, ಕಣ್ಣು ಕೆಂಪಾಗುವಿಕೆ ಇವೂ ಕಂಡುಬರುವುದುಂಟು. ಮೂಗಿನಿಂದ ನೀರಿನಂಥ ದ್ರವ ಅಧಿಕವಾಗಿ ಸೋರುತ್ತದೆ. ಒಂದೆರಡು ದಿವಸಗಳ ಕಾಲ ಈ ಸ್ಥಿತಿ ಇದ್ದು ಏಕಾಣುಗಳ ಉಪರಿ ಸೋಂಕಿನಿಂದ ದ್ರವ ಕೀವುಯುಕ್ತವಾಗಿ ಮಂದವಾಗುತ್ತದೆ. ಮೂಗಿನಿಂದ ಉಸಿರಾಡುವುದಕ್ಕೆ ತೊಂದರೆ ಆಗುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಜ್ವರವೂ ಇರಬಹುದು. ರುಂಡದ ವಾಯುಕುಹರಗಳ ಉರಿಯೂತ ನೆಗಡಿಯಲ್ಲಿ ಒಂದು ವಿಶಿಷ್ಟ ಜಟಿಲತೆಯಾಗಿ ಕಾಣಿಸಿಕೊಳ್ಳುವುದಿದೆ.

	ಇನ್‍ಫ್ಲೂಎಂಜಾ: ಕೂರಾಗಿ ಎರಗುವ ಈ ರೋಗಕ್ಕೆ ಬರ್ಕ್‍ಫೆಲ್ಡ್ ಶೋಷಕವನ್ನು ತೂರಿಹೋಗಬಲ್ಲ ವೈರಸ್ ಕಾರಣವಾಗಿದೆ. ಇದರಲ್ಲಿ ಂ ಮತ್ತು ಃ ಎಂಬ ಎರಡು ಬಗೆಗಳೆವೆ. ಂ ಗುಂಪಿಗೆ ಸೇರಿದ ವೈರಸ್ಸಿನ ಸೋಂಕೇ ಹೆಚ್ಚು ಸಾಮಾನ್ಯ ಮತ್ತು ಸಾಂಕ್ರಾಮಿಕ. ಃ ಗುಂಪಿಗೆ ಸೇರಿದ ವೈರಸ್ಸಿನಿಂದ ಬರುವ ರೋಗ ವಿರಳವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಇನ್‍ಫ್ಲೂಎಂಜಾದಲ್ಲಿ ಹೀಮಾಫಿಲಿನ್ ಮುಂತಾದ ಅನೇಕ ಬಗೆಯ ಏಕಾಣುಗಳ ಉಪರಿ ಸೋಂಕು ಉಂಟಾಗುವುದು ಸಾಮಾನ್ಯ. ಇದರಿಂದ ಬ್ರಾಂಕೋನ್ಯುಮೋನಿಯ ರೋಗ ಉಂಟಾಗಬಹುದು. ಇನ್‍ಫ್ಲೂಎಂಜಾ ರೋಗ ವಾಸಿ ಆದ ಬಳಿಕ ವೈರಸ್ಸಿನ ಮರುಸೋಂಕಿನ ವಿರುದ್ಧ ರಕ್ಷಣೆ ಕೆಲವೇ ವಾರಗಳು ಅಥವಾ ತಿಂಗಳುಗಳ ಕಾಲ ಮಾತ್ರ ಇರುತ್ತದೆ. ಸೋಂಕು ಉಂಟಾದ ಬಳಿಕ ಇದರ ಪರಿಪಕ್ವ ಕಾಲ 24-48 ಗಂಟೆಗಳು. ಆ ಕಾಲ ಕಳೆದ ಮೇಲೆ ರೋಗಲಕ್ಷಣಗಳು ಹಠಾತ್ತಾಗಿ ಕಂಡುಬರುತ್ತವೆ. ಆಲಸ್ಯ, ತಲೆನೋವು, ಬೆನ್ನು ಮತ್ತು ಕೈಕಾಲುಗಳಲ್ಲಿ ನೋವು ಹಸಿವು ಅಡಗುವಿಕೆ, ಕೆಲವು ವೇಳೆ ಹೊಟ್ಟೆತೊಳಸು ಮತ್ತು ವಮನ ಇವು ಈ ಲಕ್ಷಣಗಳು. 37.1º—38.2º ಅ ಯಷ್ಟು ಜ್ವರ ಇರುತ್ತದೆ. ರೋಗಿಗೆ ಚಳಿ ಎನ್ನಿಸಿದರೂ ಮೈನಡುಕ ಕಾಣಬರುವುದು ಅಪರೂಪ. ಕಣ್ಣುಮುಖ ಕೆಂಪಡರಿರುತ್ತವೆ. ಹೃದಯದ ಮಿಡಿತದ ವೇಗ ಅಧಿಕವಾಗುವುದೂ ಉಂಟು. ಕೊನೆಯಲ್ಲಿ ಮೈ ಬೆವರು ಬರಬಹುದು. ದೈಹಿಕವಾಗಿ ಪರೀಕ್ಷೆ ಮಾಡಿದಾಗ ಯಾವ ಅಸಹಜ ಲಕ್ಷಣಗಳೂ ಕಂಡುಬರುವುದಿಲ್ಲ.

	3 ಧ್ವನಿಪೆಟ್ಟಿಗೆಯ ಉರಿಯೂತ: ಕೂರು ಇಲ್ಲವೆ ದೀರ್ಘಕಾಲಿಕವ್ಯಾಧಿ. ಕೂರಾದ ಉರಿಯೂತಕ್ಕೆ ನೆಗಡಿ ಇಲ್ಲವೆ ದಡಾರದ ಸೋಂಕು ಮೂಲಕಾರಣವಾಗಿ ಇರಬಹುದು. ಘಾಟು ಅನಿಲಗಳು ಅಪರೂಪ ಕಾರಣವಾಗಿರುತ್ತವೆ. ದೀರ್ಘಕಾಲಿಕ ಉರಿಯೂತಕ್ಕೆ ಕೂರಾದ ಉರಿಯೂತದ ಮರುಕಳಿಕೆ, ಜೋರಾಗಿ ಕಿರುಚಿ ಕೂಗಾಡುವುದು, ಅತಿಯಾಗಿ ಮತ್ತು ನಿರಂತರವಾಗಿ ಗಂಟೆಗಟ್ಟಲೆ ದಿನದಿನವೂ ಮಾತನಾಡುವುದು, ಧೂಮಪಾನ, ಮದ್ಯಪಾನ, ಇತ್ಯಾದಿ ಕಾರಣ. ಧ್ವನಿಪೆಟ್ಟಿಗೆಯ ಕೂರು ಉರಿಯೂತದಲ್ಲಿ ಗಂಟಲು ಒಣಗಿರುವುದಲ್ಲದೆ ನೋಯುತ್ತಿರುತ್ತದೆ ಕೂಡ. ಮೊದಲು ಧ್ವನಿ ಒಡೆಯುತ್ತದೆ. ಅನಂತರ ಧ್ವನಿ ಕೂತುಹೋಗಿ ಪಿಸುಮಾತಿನಂತೆ ಕೇಳಿಬರುತ್ತದೆ. ಮಾತಾಡಿದಾಗ ಗಂಟಲು ನೋಯುವುದೂ ಉಂಟು. ಕಫ ಬರದ ತ್ರಾಸದಾಯಕ ಕೆಮ್ಮು ಇರುತ್ತದೆ. ಮಕ್ಕಳಲ್ಲಿ ವಾಂತಿ, ಉಸಿರಾಟದ ತೊಂದರೆ, ಉಸಿರಾಡಿದಾಗ ಕರ್ಕಶ ಶಬ್ದವಾಗುವುದು, ಉಸಿರೆಳೆದುಕೊಂಡಾಗ ಕೋಳಿ ಕೂಗಿದಂಥ ಶಬ್ದವಾಗುವುದು, ಮುಖ ಕೈಗಳು ನೀಲಿಗಟ್ಟುವುದು ಕಂಡುಬರುತ್ತವೆ. ಕೊನೆಗೆ ಮಗುವಿಗೆ ಎಚ್ಚರ ತಪ್ಪಲೂಬಹುದು. ಧ್ವನಿಪೆಟ್ಟಿಗೆಯ ದೀರ್ಘಕಾಲಿಕ ಉರಿಯೂತದಲ್ಲಿ ಗಂಟಲು ಕಟ್ಟಿಕೊಂಡಿರುತ್ತದೆ ಮತ್ತು ನೋಯುತ್ತದೆ. ಬಲುಕಾಲ ಗಾರಿ ಕೆಮ್ಮಿ ಕ್ಯಾಕರಿಸಿದ ಬಳಿಕ ಲೋಳೆಯಂಥ ಕಫ ಅತ್ಯಂತ ಕಡಿಮೆ ಪರಿಮಾಣದಲ್ಲಿ ಹೊರ ಬರುತ್ತದೆ.
	4 ಶ್ವಾಸನಾಳದ ಹಾಗೂ ಶ್ವಸನಿಗಳ ಕೂರು ಉರಿಯೂತ: ಹೀಮಾಫಿಲಿಸ್ ಮುಂತಾದ ಹಲವು ಜಾತಿಯ ಏಕಾಣುಗಳು ಈ ರೋಗಗಳಿಗ ಕಾರಣ. ತಂಡಿಯಾದ, ಮಂಜುಗವಿದ ಇಲ್ಲವೆ ಧೂಳುಯುಕ್ತವಾದ ವಾತಾವರಣದಲ್ಲಿ ಬಾಯಿಯಿಂದ ಉಸಿರಾಡುವುದು ಸೋಂಕು ಅಂಟಲು ಅನುವಾಗುತ್ತದೆ. ವೇದನೆ ಉಂಟುಮಾಡುವ ಕೆಮ್ಮು, ಎದೆಬಿಗಿತ, ಗೂರಲಿನ ರೀತಿಯ ಉಸಿರಾಟದ ತೊಂದರೆ ಇವು ಈ ರೋಗದ ಲಕ್ಷಣಗಳು. ಶ್ವಸನಿ ವೃಕ್ಷಕ್ಕೆ (ಬ್ರಾಂಕಿಯಲ್‍ಟ್ರೀ) ಸೋಂಕು ಹರಡಿದಾಗ 37.7º—39.3º ಯಷ್ಟು ಜ್ವರ ಕಾಣಿಸಿಕೊಳ್ಳಬಹುದು.

	5 ಶ್ವಸನಿಯ ದೀರ್ಘಕಾಲಿಕ ಉರಿಯೂತ: ದೂಳು, ಹೊಗೆ, ದೂಪ, ತಂಬಾಕು ಸೇದುವಿಕೆ ಇವುಗಳಿಂದ ಶ್ವಸನಿಯ ಲೋಳೆಪೂರೆ ಉದ್ರೇಕಗೊಂಡು ಇಂಥ ಉರಿಯೂತ ವ್ಯಕ್ತವಾಗಬಹುದು. ಇತರ ಶ್ವಾಸಾಂಗಗಳ ರೋಗಗಳು, ಉದಾಹರಣೆಗೆ, ರುಂಡದ ವಾಯಕುಹರದ ಸೋಂಕು, ಶ್ವಸನಿಯ ಹಿಗ್ಗು ರೋಗ ಇವು ಹರಡುವುದರ ಪರಿಣಾಮವಾಗಿಯೂ ಹೃದ್ರೋಗದ ಪರಿಣಾಮವಾಗಿಯೂ ಶ್ವಸನಿಯ ಇಂಥ ಉರಿಯೂತ ಕಂಡುಬರಬಹುದು. ಗೂರಲಿನಲ್ಲಿಯಂಥ ಉಸಿರಾಟದ ತೊಂದರೆ ಮತ್ತು ಎದೆಬಿಗಿತಗಳು ಸಾಮಾನ್ಯವಾಗಿ ಕಂಡುಬರುವ ತೊಂದರೆಗಳು. ಕಡಿಮೆ ಪ್ರಮಾಣದ ಜಿಗಟಾದ ಕಫ ಬೆಳಗಿನವೇಳೆ ಬರುತ್ತದೆ. ಅಪರೂಪವಾಗಿ ಕಫ ಲೋಳೆಯಾಗಿ, ರಕ್ತಯುಕ್ತವಾಗಿ, ನೀರಾಗಿ ಇಲ್ಲವೆ ಅಧಿಕ ಮೊತ್ತವಾಗಿ ಹೊರಬರಬಹುದು.

	6 ಗೂರಲು ರೋಗ: ಲಿಂಗಭೇದ, ಕಾಲಭೇದ, ವಯಸ್ಸಿನ ಭೇದ ಯಾವುದೂ ಇಲ್ಲದೆ ಯಾರಿಗಾದರೂ ಈ ರೋಗ ಬರಬಹುದು. ದೇಹ ಪ್ರಕೃತಿ ಹಾಗೂ ಮಾನಸಿಕ ತೊಂದರೆಗಳು ವ್ಯಕ್ತಿ ಈ ರೋಗಕ್ಕೆ ಈಡಾಗಲು ಸಹಾಯಕ, ಉಸಿರಾಟ, ಸೇವನೆ, ಸ್ಪರ್ಶ ಇತ್ಯಾದಿ ಯಾವ ರೀತಿಯಿಂದಾದರೂ ದೇಹದ ಒಳ ಹೊಕ್ಕವಸ್ತು ವ್ಯಕ್ತಿಗೆ ಒಗ್ಗದಂಥದ್ದಾಗಿದ್ದು ಕ್ಷಿಪ್ರ ಪ್ರತಿಕ್ರಿಯೆ ಉಂಟುಮಾಡುವುದರಿಂದ ದಮ್ಮು ಹತ್ತಿ ಬರುವಂತಾಗುತ್ತದೆ. ಆಹಾರ ಪದಾರ್ಥಗಳ ಪೈಕಿ ಯಾವುದಾದರೂ ಒಗ್ಗದಿರಬಹುದು. ಅದನ್ನು ರೋಗಿ ಸೇವಿಸಿದಾಗ ಇಂಥ ಕ್ಷಿಪ್ರ ಪ್ರತಿಕ್ರಿಯೆ ಉಂಟಾಗುವುದು ಸಾಮಾನ್ಯ. ದೂಳು, ಬೂಷ್ಟು, ಹುಲ್ಲು, ಹೂವಿನ ಪರಾಗ, ಪುಕ್ಕಗಳು, ಪ್ರಾಣಿಗಳ ವಾಸನೆ, ಮುಖದ ಕಾಂತಿವರ್ಧಕ ಚೂರ್ಣ ಮುಂತಾದವುಗಳಿಗೂ ವ್ಯಕ್ತಿ ಸೂಕ್ಷ್ಮ ಪ್ರತಿಕ್ರಿಯೆ ಹೊಂದಿರಬಹುದು. ಶ್ವಸನಿಗಳ ಸೋಂಕಿನಿಂದಲೂ ಗೂರಲು ಬರಬಹುದು. ಗೂರಲು ಅಥವಾ ದಮ್ಮು ಇದ್ದಕ್ಕಿದ್ದಂತೆಯೇ ಪ್ರಾರಂಭವಾಗುತ್ತದೆ. ಎದೆಬಿಗಿತ, ಬಂಧಿತ ನಿಶ್ವಾಸದಂಥ ಉಸಿರಾಟದ ತೊಂದರೆ, ಈ ವೇಳೆಯಲ್ಲಿ ಕೆಮ್ಮು ಹತ್ತಿಹತ್ತಿ ಬರುವುದು ಇವು ಉಂಟಾಗಿ ಮುಖ ಬಿಳಿಚಿಕೊಳ್ಳುತ್ತದೆ ಇಲವೇ ನೀಲಿಗಟ್ಟುತ್ತದೆ. ಹೃದಯದ ಮಿಡಿತದ ದರ ತೀವ್ರವಾಗುತ್ತದೆ. ದೀರ್ಘಕಾಲಿಕ ಗೂರಲು ರೋಗದಲ್ಲಿ ಶ್ರಮ ಕೆಲಸ ಮಾಡಿದಾಗ ಗೂರಲು ಮತ್ತು ದಮ್ಮು ಕಾಣಬರುತ್ತವೆ. ಗೂರಲಿನ ಜಟಿಲತೆಯಾಗಿ ಶ್ವಸನಿಗಳ ದೀರ್ಘಕಾಲಿಕ ಉರಿಯೂತ ಹಾಗೂ ಪುಪ್ಛುಸದ ಉರಿಯೂತಗಳು ಕಾಣಬರಬಹುದು. ಹೀಗಾದಾಗ ಕೆಮ್ಮು ಲೋಳೆಯಂಥ ಕಫ ಬರುವುದು ವಿಶೇಷ ಲಕ್ಷಣಗಳು.

	7 ಪುಪ್ಛುಸದ ಉರಿಯೂತ: ಕ್ಷಯರೋಗಾಣು, ಫ್ರೀಡ್‍ಲ್ಯಾಂಡರಿನ ಏಕಾಣು ಮುಂತಾದ ಅನೇಕ ಬಗೆಯ ಏಕಾಣುಗಳೂ ಗಿಳಿರೋಗ, ಕ್ಯುಜ್ವರ ಮುಂತಾದವನ್ನು ಉಂಟುಮಾಡುವ ವೈರಸ್ಸುಗಳೂ ರಿಕೆಟ್ಸಿಯ ಗುಂಪಿನ ವಿಷಾಣುಗಳೂ ಸೋಂಕನ್ನು ಉಂಟುಮಾಡುವುದರಿಂದ ಫುಪ್ಛುಸದ ಉರಿಯೂತ ಕಂಡುಬರುತ್ತದೆ. ನೆರಡಿರೋಗ, ಪ್ಲೇಗ್ ಮಿಥ್ಯಕಾಲರಾ, ಪರಂಗಿರೋಗ ಇವುಗಳ ಕಾರಕಗಳಾದ ಏಕಾಣುಗಳ ಸೋಂಕಿನಿಂದಲೂ ಆಸ್ಪರ್ಜಿಲ್ಲಲ್, ಇಸ್ರೇಲಿನ ರಶ್ಮಿ ಶಿಲೀಂಧ್ರ, ಕಣಿವೆ ಜ್ವರಕಾರಕ ಶಿಲೀಂಧ್ರ, ಹಿಸ್ಪೋಪ್ಲಾಸ್ಮ ಮುಂತಾದ ಶಿಲೀಂಧ್ರಗಳ ಸೋಂಕಿನಿಂದಲೂ ಮೈಕ್ರೊಫೈಲೇರಿಯಗಳು ಪುಪ್ಛುಸಗಳ ರಕ್ತನಾಳಗಳಲ್ಲಿ ಶೇಖರಿಸುವುದರಿಂದಲೂ ಪುಪ್ಛುಸಗಳ ಉರಿಯೂತ ಉಂಟಾಗಬಹುದು. ರೋಗ ಹಠಾತ್ತಾಗಿ ಪ್ರಾರಂಭವಾಗುತ್ತದೆ. ಉಗ್ರವಾದ ನಡುಕ, ವಾಂತಿ, ಮಕ್ಕಳಲ್ಲಿ ಸೆಳವು, 38.8º-39.9º ಯಷ್ಟು ಜ್ವರ ಆಲಸ್ಯ, ಹಸಿವಡಗುವಿಕೆ, ತಲೆನೋವು, ನಿರಂತರವಾಗಿ ದೈಹಿಕಯಾತನೆ, ಉಸಿರಾಟ ಮತ್ತು ಹೃದಯದ ಮಿಡಿತದ ವೇಗಗಳು ಅತ್ಯಧಿಕವಾಗಿರುವುದು ಇತ್ಯಾದಿ ಈ ರೋಗದ ಪ್ರಮುಖ ಲಕ್ಷಣಗಳು. ಕೆಲವು ವೇಳೆ ಅರಿಶಿನ ಕಾಮಾಲೆಯೂ ಕಾಣಬರಬಹುದು. ಶ್ವಸನಿಯ ಉರಿಯೂತ ಪುಪ್ಛುಸಗಳಿಗೆ ಹರಡುವುದು ಸಾಮಾನ್ಯ.

	(i) ವೈರಸ್‍ಕೃತ ಪುಪ್ಛುಸ ಉರಿಯೂತ: ಇದನ್ನು ಪ್ರಾಥಮಿಕ ಅಥವಾ ಅಸಾಂಕೇತಿಕ ಪುಪ್ಛುಸ ಉರಿಯೂತವೆಂದೂ ಕರೆದಿದೆ. ಶೋಷಕವನ್ನು ತೂರಿಹೋಗಬಲ್ಲ ವೈರಸ್ಸುಗಳು ಈ ರೋಗವನ್ನು ಉಂಟು ಮಾಡುತ್ತವೆ. ಚಳಿಗಾಲದ ಕೊನೆಯಲ್ಲಿ ಪಾಠಶಾಲೆ, ಸೈನಿಕ ಶಿಬಿರ ಮುಂತಾಗಿ ಜನ ಒತ್ತಾಗಿ ಕಲೆಯುವ ಕಡೆ ಈ ರೋಗ ಸಾಂಕ್ರಾಮಿಕವಾಗಿ ಹರಡುತ್ತದೆ. ಆದರೆ ಅಲ್ಲೊಂದು ಇಲ್ಲೊಂದು ಪ್ರಸಂಗದಂತೆ ವಿರಳವಾಗಿ ಕಾಣಿಸಿಕೊಳ್ಳುವುದೂ ಉಂಟು. ಸೋಂಕಿನ ಪರಿಪಕ್ವಕಾಲ 1-3 ವಾರಗಳು. ರೋಗ ಅವ್ಯಕ್ತವಾಗಿ ಪ್ರಾರಂಭಿಸಿ ಅನಂತರ ಆಲಸ್ಯ, ಚಳಿ, ಜ್ವರ ಮುಂತಾದವು ಸರ್ವಸಾಧಾರಣ ಲಕ್ಷಣಗಳಾಗಿಯೂ ಒಣಕೆಮ್ಮು ಇಲ್ಲವೆ ಬಲು ಕಡಿಮೆ ಕಫ ಬರುವ ಕೆಮ್ಮು ವಿಶಿಷ್ಟ ಲಕ್ಷಣವಾಗಿಯೂ ವ್ಯಕ್ತವಾಗುತ್ತವೆ. ಬೇರೆ ಯಾವ ದೈಹಿಕ ಲಕ್ಷಣಗಳೂ ಕಂಡುಬರುವುದಿಲ್ಲ. ಆದರೆ ಎಕ್ಸ್ ಕಿರಣ ಪರೀಕ್ಷೆ ಮಾಡಿದಾಗ ಯಾವುದಾದರೂ ಪುಪ್ಛುಸ ಹಾಲೆಯಲ್ಲಿ ಭಾಗಶಃ ಅಥವಾ ಪೂರ್ತಿಯಾಗಿ, ಆದರೆ ಸರಿಯಾದ ಎಲ್ಲೆ ಇಲ್ಲದ ಹಾಗೂ ತೇಪತೇಪೆಯಾದ ಘನೀಕರಣ (ಕನ್‍ಸಾಲಿಡೇಷನ್) ಆಗಿರುವುದು ಕಂಡುಬರುತ್ತದೆ.

	(ii) ಕ್ಷಯರೋಗ: ಮಾನವ ಹಾಗೂ ಪಶುಗಳ ಕ್ಷಯರೋಗಾಣುಗಳ ಸೋಂಕಿನಿಂದ ಯಾರಿಗಾದರೂ ಯಾವಾಗಲಾದರೂ ಕ್ಷಯರೋಗ ಅಂಟಬಹುದು. ಆದರೆ ಪಕ್ಷಿಕ್ಷಯದ ರೋಗಾಣುಗಳು ಮಾನವರಲ್ಲಿ ಸೋಂಕು ಉಂಟುಮಾಡುವುದು ಅಪರೂಪ. ಕ್ಷಯರೋಗದಲ್ಲಿ ದೈಹಿಕವಾಗಿ ಕಾಣಬರುವ ಲಕ್ಷಣಗಳಿಗಿಂತಲೂ ಇತರ ಲಕ್ಷಣಗಳೇ ಪ್ರಧಾನ. ಆಲಸ್ಯ. ಹಸಿವಡಗುವಿಕೆ, ತೂಕ ಕಡಿಮೆ ಆಗುವುದು, ರಕ್ತಹೀನತೆ, ರಾತ್ರಿವೇಳೆ ಮೈ ಬೆವರುವುದು, ಜ್ವರ ಮತ್ತು ಹೃದಯದ ವೇಗ ಮಿಡಿತ ಇವು ಇಂಥ ಲಕ್ಷಣಗಳು, ಸಂಜೆಯವೇಳೆ ಜ್ವರ ಹೆಚ್ಚಾಗುತ್ತದೆ. ಕೆಮ್ಮು, ಕಫ, ರಕ್ತ ಕಫ ಉಸಿರಾಟದ ತೊಂದರೆಗಳು, ಎದೆನೋವು, ದ್ವನಿ ಒಡೆಯುವುದು, ನುಂಗಲು ಕಷ್ಟವಾಗುವುದು, ಅಪರೂಪವಾಗಿ ನಾಲಿಗೆಯಲ್ಲಿ ಗಾಯಗಳು, ಭೇದಿ ಇವೂ ಸಾಮಾನ್ಯ. ಜಲೋದರ, ಕರುಳಿನಲ್ಲಿ ವಸ್ತುಚಲನೆಗೆ ತಡೆ, ಹೃದಯದ ಹೊರ ಕವಚದಲ್ಲಿ ದ್ರವಶೇಖರಣೆ, ಹೃದಯ ಕವಚದ ಸಂಪೀಡಕ ಉರಿಯೂತ (ಕನ್‍ಸ್ಟ್ರಿಕ್ಟಿವ್ ಪೆರಿಕಾರ್ಡೈಟಿಸ್) ಇವು ಈ ರೋಗದಲ್ಲಿ ಸಾಮಾನ್ಯ ಜಟಿಲತೆಗಳು. ರಕ್ತಮೂತ್ರ, ಅನೇಕ ಬಾರಿ ಮೂತ್ರವಿಸರ್ಜನೆ, ವೃಷಣಾಗ್ರದ ಉರಿಯೂತದಿಂದ ಅಲ್ಲಿ ನೋವು, ಅಡಿಸನ್ನನ ರೋಗಲಕ್ಷಣಗಳು, ಮೂಳೆಯ ಚರ್ಮದ ಮತ್ತು ಕಣ್ಣಿನ ತೊಂದರೆಗಳು ಅಪರೂಪ ಜಟಿಲತೆಗಳು. ರೋಗ ಕೂರಾಗಿರಬಹುದು ಇಲ್ಲವೆ ದೀರ್ಘಕಾಲಿಕವಾಗಿರಬಹುದು.
	(iii) ಉಚ್ಛ್ವಸಿತ ಫುಪ್ಛುಸಿತ ಉರಿಯೂತ (ಆಸ್ಪಿರೇಷನ್ ನ್ಯುಮೋನಿಯ): ರುಂಡದ ವಾಯುಕುಹರಗಳ ಉರಿಯೂತ ಉಂಟಾಗಿದ್ದಾಗ ರೋಗಿ ನಿದ್ರೆವೇಳೆ ಉಸಿರಾಡುವಾಗ ಕುಹರದಿಂದ ಬಂದ ಕೀವನ್ನು ಪುಪ್ಛುಸಗಳ ಒಳಕ್ಕೆ ಎಳೆದುಕೊಳ್ಳಬಹುದು. ಶ್ವಸನಿಯ ಕೂರು ಉರಿಯೂತ, ಇನ್‍ಫ್ಲ್ಯೂಎಂಜ, ದಡಾರ ಮತ್ತು ನಾಯಿಕೆಮ್ಮು ಇರುವಾಗಲೂ ಹೀಗೆಯೇ ಸೋಂಕುಕಾರಕವಸ್ತುಗಳನ್ನು ಉಚ್ಛ್ವಸಿಸಬಹುದು. ಪುಪ್ಛಸದ ಕುರುವಿನಿಂದ ಕೀವು ಉಸಿರಾಡುವಾಗ ನೆರೆಪ್ರಾಂತ್ಯಗಳಿಗೆ ಸೆಳೆಯಲ್ಪಡಬಹುದು. ಈ ಎಲ್ಲ ಕಾರಣಗಳಿಂದ ಪುಪ್ಛಸದ ಉರಿಯೂತ ಉಂಟಾಗುತ್ತದೆ.

	(iv) ಮೇದಸ್ಸಿನಂಥ ವಸ್ತುಗಳಿಂದಾದ ಪುಪ್ಛುಸ ಉರಿಯೂತ: ಗಂಟಲು ನೋವಿಗಾಗಿ ಪೆಟ್ರೋಲೇಟಮ್‍ದ್ರವ ಮುಂತಾದ ಖನಿಜ ಎಣ್ಣೆಗಳಿಂದ ಪದೆ ಪದೇ ಗಂಟಲು ಮೂಗುಗಳನ್ನು ಸಿಂಪಡಿಸಿದಾಗ ಈ ರೋಗ ಕಂಡುಬರುತ್ತದೆ. ಮಕ್ಕಳಲ್ಲಿ ಇದು ಹೆಚ್ಚು ಸಾಮಾನ್ಯ. ಮಕ್ಕಳಿಗೆ ಒತ್ತಾಯದಿಂದ ಮೀನಿನ ಎಣ್ಣೆಯನ್ನು ಕುಡಿಸುವಾಗ, ಶ್ವಾಸಾಂಗಗಳ ಕಾಯಿಲೆಯಲ್ಲಿ ವೈದ್ಯರ ಆದೇಶವಿಲ್ಲದೆ ಔಷಧರೂಪದ ಎಣ್ಣೆಗಳನ್ನು ಹನಿಹನಿಯಾಗಿ ಹಾಕಿಕೊಂಡಾಗ ಇತ್ಯಾದಿ ಸಂದರ್ಭಗಳಲ್ಲೂ ಈ ರೋಗ ಬರುತ್ತದೆ. ವಾಹನಗಳಲ್ಲಿ, ಅವುಗಳ ಚಾಲನೆಗೆ ಆವಶ್ಯವಾದ ಎಣ್ಣೆಗಳು ಅವುಗಳ ನಾಳದ ಅಡಚಣೆಯಿಂದ ಸರಿಯಾಗಿ ಹರಿಯದೆ ಇದ್ದಾಗ ಅದನ್ನು ಸರಿಪಡಿಸಲು ನಾಳದ ಮೂಲಕ ಉಸಿರನ್ನು ರಭಸದಿಂದ ಎಳೆದುಕೊಳ್ಳುವುದು ವಾಡಿಕೆ. ಹೀಗೆ ಮಾಡಿದಾಗ ನಾಳದ ಎಣ್ಣೆ ಪುಫ್ಛುಸ ಸೇರಿ ಉರಿಯೂತ ಮತ್ತು ಕೊಳೆತ ಉಂಟುಮಾಡಬಹುದು. ಸ್ಥಿತಿ ಉಗ್ರವಾಗಿದ್ದು ಮಾರಕವಾಗಿಯೂ ಪರಿಣಮಿಸಬಹುದು.

	8 ಪುಪ್ಛುಸದ ಕುರು: ಮೂಗು, ಬಾಯಿ ಅಥವಾ ಗಂಟಲಿನ ಮೇಲೆ ಶಸ್ತ್ರ ಚಿಕಿತ್ಸೆ ಮಾಡುವಾಗ ಸೋಂಕುಕಾರದ ವಸ್ತುಗಳು ಪುಪ್ಛುಸದೊಳಕ್ಕೆ ಎಳೆದುಕೊಳ್ಳಲ್ಪಟ್ಟು, ಉರಿಯೂತದ ಬದಲು ಕುರುವೇ ಉಂಟಾಗಬಹುದು. ಸೋಂಕು ಕಾರಕಗಳು ನಾನಾಬಗೆಯ ಏಕಾಣುಗಳಾಗಿರಬಹುದೆಂಬುದು ಈ ರೋಗಿಗಳ ಕಫಪರೀಕ್ಷೆಯಿಂದ ವ್ಯಕ್ತವಾಗಿದೆ. ರೋಗ ಅವ್ಯಕ್ತವಾಗಿ, ನಿಧಾನವಾಗಿ ಪ್ರಾರಂಭವಾಗುವುದೇ ಸಾಮಾನ್ಯವಾದರೂ ಕೂರಾಗಿರುವುದೂ ಉಂಟು. ಕೆಮ್ಮು ಕೀವುಯುಕ್ತ ಕಫ, ಅಧಿಕ ಪ್ರಮಾಣದಲ್ಲಿ ದುರ್ವಾಸನೆಯ ರಕ್ತಯುಕ್ತ ಕಫ, ಬಿಟ್ಟು ಬಿಟ್ಟು ಬರುವ ಜ್ವರ, ಎದೆನೋವು, ಬೆರಳತುದಿ ಗುಂಡಿಗೆ ಊದಿರುವುದು, ರೋಗಿಯ ತೂಕ ಕಡಿಮೆ ಆಗುವುದು ಇತ್ಯಾದಿ ಈ ರೋಗದ ಲಕ್ಷಣಗಳು.

	9 ಶ್ವಸನಿಗಳ ಹಿಗ್ಗುರೋಗ: ಶ್ವಸನಿಯ ಉರಿಯೂತದಲ್ಲಿ ಯಾವ ಕಾರಣದಿಂದಲೇ ಆಗಲಿ ಅದರ ಕವಲೊಂದರಲ್ಲಿ ತಡೆ ಉಂಟಾದಾಗ, ತಡೆಯ ಮುಂದಿನ ಭಾಗಗಳಲ್ಲಿ ಶೇಖರಿಸಲ್ಪಟ್ಟ ಕೀವು ಶ್ವಸನಿಯ ಕವಲನ್ನು ಹಿಗ್ಗಿಸುವುದರಿಂದ ಈ ರೋಗ ಉಂಟಾಗುತ್ತದೆ. ಅಪರೂಪವಾಗಿ ಶ್ವಸನಿಯ ಕವಲಿನಲ್ಲಿ ಕಾಣಬರುವ ಆಜನ್ಮ ನ್ಯೂನತೆಗಳಿಂದಲೂ ಈ ರೋಗ ಪ್ರಾಪ್ತವಾಗಬಹುದು. ಕೆಮ್ಮು ಮತ್ತು ಕಫ ಬೆಳಗಿನ ವೇಳೆ ಹೆಚ್ಚಾಗಿರುತ್ತವೆ. ಕೀವಿನಿಂದ ಕೂಡಿದ ಕಫ ದುರ್ನಾತಯುಕ್ತವಾಗಿರುತ್ತದೆ. ರಕ್ತ ಕಫವೂ ಇರಬಹುದು. ಆಲಸ್ಯ, ಜ್ವರ, ಹಸಿವು ಅಡಗಿರುವಿಕೆ, ವ್ಯಕ್ತಿಯ ತೂಕ ಕಡಿಮೆ ಆಗುವಿಕೆ, ರಾತ್ರಿ ಮೈ ಬೆವರುವುದು, ಬೆರಳು ತುದಿಗಳು ಗುಂಡಗೆ ಊದಿಕೊಳ್ಳುವುದು-ಇವು ಪ್ರಮುಖ ಲಕ್ಷಣಗಳು. ಪ್ಲೂರದ ಪೊರೆಗಳ ನಡುವೆ ಕೀವು ತುಂಬಿಕೊಂಡಿರಬಹುದು. ಇದಕ್ಕೆ ಎಂಪೈಯೀಮ ಎಂದು ಹೆಸರು. ಇದು ಒಂದು ಜಟಿಲತೆಯಾಗಿ ಕಂಡುಬರಬಹುದು.

	10 ಪುಪ್ಛುಸಕುಸಿತ (ಪಲ್ಮನರಿ ಕೊಲಾಪ್ಸ್): ಶ್ವಸನಿಗಳಲ್ಲಿ ತಡೆ ಉಂಟಾಗಿ ಉಚ್ಛ್ವಸಿಸಿದ ವಾಯು ಪುಪ್ಛುಸದ ವಾಯುಕೋಶಗಳಿಗೆ ತಲಪದೇ ಇದ್ದಾಗ ಅಲ್ಲಿಯ ವಾಯು ಕ್ರಮೇಣ ರಕ್ತದಿಂದ ಹೀರಲ್ಪಟ್ಟು ಫುಪ್ಛುಸದ ಆ ಭಾಗ ಗಾಳಿಬಿಟ್ಟ ಬಲೂನಿನಂತೆ ಸಣ್ಣದಾಗಿ ಕುಗ್ಗಿಹೋಗುತ್ತದೆ. ಇದಕ್ಕೆ ಪುಪ್ಛುಸಕುಸಿತ ಅಥವಾ ನ್ಯೂನವಿಸ್ತರಣೆ ಎಂದು ಹೆಸರು. ಶ್ವಸನಿಯ ಕವಲಿನಲ್ಲಿ ಜಿಗಟಾದ ಸ್ರಾವ ಅಲ್ಲೆ ಇರುವ ಅಥವಾ ನೆರೆಪ್ರಾಂತ್ಯದಲ್ಲಿರುವ ಏಡಿಗಂತಿ ಇಲ್ಲವೆ ಬೇರೆಗೆಡ್ಡೆಗಳು ಪುಪ್ಛುಸದ ನಾಭಿಯಲ್ಲಿರುವ ದುಗ್ಧರಸ, ಗ್ರಂಥಿಗಳು, ಹೊರವಸ್ತುಗಳು ಇವುಗಳಿಂದ ಅಡಚಣೆ ಉಂಟಾಗಬಹುದು. ಪುಪ್ಛಸ ಕುಸಿತದಲ್ಲಿ ಉಸಿರಾಟದ ತೊಂದರೆ ಇರುತ್ತದೆ. ಕೆಲವು ರೋಗಿಗಳಲ್ಲಿ ಕುಸಿತವಾದ ಎದೆಭಾಗದಲ್ಲಿ ನೋವು ಕಾಣಿಸಬಹುದು.

	11 ಶ್ವಸನಿಯಲ್ಲಿ ಏಡಿಗಂತಿ: ಇದು ಸುಳಿವು ಕೊಡದೆ ನಿಧಾನವಾಗಿ ಪ್ರಾರಂಭವಾಗುತ್ತದೆ. ಕೆಮ್ಮು ಇದ್ದೇ ಇರುವುದಾದರೂ ಉಪರಿಸೋಂಕಿಲ್ಲದಿದ್ದರೆ ಮೊದ ಮೊದಲು ಕಫ ಇರುವುದಿಲ್ಲ. ಅನಂತರ ರಕ್ತಯುಕ್ತ ಕಫ ಬರಬಹುದು. ಉಸಿರಾಟದ ತೊಂದರೆ, ಜ್ವರ, ನೋವು ಇವೂ ಸಾಮಾನ್ಯ. ಸ್ಥಳಾಂತರಗೊಂಡ ಏಡಿಗಂತಿ ಕೋಶಗಳು ಮಿದುಳಿನಲ್ಲಿ ನೆಲಸಿ ಬೆಳೆದಾಗ ಅಪಸ್ಮಾರದಂಥ ಸೆಟೆವಾಯು ಕಂಡು ಬರುವುದಲ್ಲದೆ ವೈಯಕ್ತಿಕ ಬದಲಾವಣಿಯೂ ವ್ಯಕ್ತವಾಗುತ್ತದೆ. ಇಂಥದೇ ಸ್ಥಳಾಂತರದಿಂದ ಮೂಳೆಯಲ್ಲಿ ಮರಿ ಏಡಿಗಂತಿ ಉಂಟಾದರೆ ಮೂಳೆ ಮುರಿಯಬಹುದು. ಮೂತ್ರಪಿಂಡದಲ್ಲಿ ಮರಿ ಏಡಿಗಂತಿಯಾದರೆ ರಕ್ತ ಮೂತ್ರ ವಿಸರ್ಜಿತವಾಗುತ್ತದೆ. ಸ್ತನ, ಮೂತ್ರಪಿಂಡ, ತೈರಾಯ್ಡ್ ಗ್ರಂಥಿ, ವೃಷಣ, ಮೂಳೆ ಮುಂತಾದವುಗಳ ಪ್ರಾಥಮಿಕ ಏಡಿಗಂತಿಗಳಿಂದ ಸ್ಥಳಾಂತರ ಹೊಂದಿ ಮರಿಏಡಿಗಂತಿ ಪುಪ್ಫುಸದಲ್ಲಿ ಕಂಡುಬರುವುದೂ ಉಂಟು.

	12 ಪುಪ್ಫುಸಗಳ ತಂತುಕರಣ (ಪಲ್ಮನರಿ ಫೈಬ್ರೊಸಿಸ್): ಪುಪ್ಫುಸದ ಕ್ರಿಯಾತ್ಮಕ ಅಂಗಾಂಶಗಳು ನಾಶವಾದಾಗ ಆ ಭಾಗವನ್ನು ತಂತುಗಳು ಆಕ್ರಮಿಸಿಕೊಳ್ಳುತ್ತವೆ. ಮರಳು, ಬೆಣಚುಕಲ್ಲು, ಕಲ್ಲಿದ್ದಲು, ಕಲ್ನಾರು, ಕಬ್ಬಿಣದ ಅದುರು, ಹತ್ತಿ, ಗ್ರಾಫೈಟ್, ಕೇಯೋಲಿನ್ ಮುಂತಾದವುಗಳ ದೂಳು ಪುಪ್ಫುಸವನ್ನು ಸೇರಿದರೆ ಆ ದೂಳಿನ ಕಣಗಳ ಸುತ್ತ ತಂತುಕರಣವಾಗುವುದೂ ಉಂಟು. ಸ್ತನ, ಅನ್ನನಾಳ ಮುಂತಾದ ಅಂಗಗಳ ಏಡಿಗಂತಿ ಚಿಕಿತ್ಸೆಗಾಗಿ ಎಕ್ಸ್‍ಕಿರಣಗಳನ್ನು ಬಳಸಿದಾಗ ಪುಪ್ಫುಸಗಳ ಮೇಲೆ ಅವುಗಳ ಕ್ರಿಯಾಧಿಕ್ಯದಿಂದ ತಂತುಕರಣ ಕಂಡುಬರಬಹುದು.

	13 ಪುಪ್ಫುಸಗಳ ಉಬ್ಬಟೆ (ಎಫೈಸೀಮ): ಈ ರೋಗ ಸಾಮಾನ್ಯವಾಗಿ ಮಧ್ಯ ವಯಸ್ಸಿನ ನಂತರ ಹಾಗೂ ಮುದುಕರಿಗೆ ಬರುತ್ತದೆ. ಅಲ್ಲದೆ ಹೆಚ್ಚಾಗಿ ಗಂಡಸರಲ್ಲಿ ಕಂಡುಬರುತ್ತದೆ. ಅದರ ಮುಖ್ಯ ಕಾರಣ ತಂಬಾಕು, ಧೂಮಪಾನ. ದೀರ್ಘಕಾಲಿಕವಾದ ಶ್ವಸನಿಯ ಉರಿಯೂತ, ಗೂರಲು ಮುಂತಾದ ರೋಗಗಳಲ್ಲಿ ಪುಪ್ಫುಸಗಳ ಉಬ್ಬಟೆ ಸಾಮಾನ್ಯ. ಪ್ರಾರಂಭದ ಸ್ಥಿತಿಯಲ್ಲಿ ವ್ಯಕ್ತಿ ಶ್ರಮವಹಿಸಿದಾಗ ಮಾತ್ರ ಉಸಿರಾಟದ ತೊಂದರೆ ಕಂಡು ಬರುತ್ತದೆ. ಅನಂತರ ಯಾವಾಗಲೂ ಉಬ್ಬಸ ಇರುತ್ತದೆ. ಪುಪ್ಫುಸದ ಯಾವುದೇ ಸೋಂಕಿನಿಂದಲೂ ಉಬ್ಬಸ ಉಲ್ಬಣಿಸುತ್ತದೆ. ಕೆಲವು ಸಲ ಮುಖ ನೀಲಿಗಟ್ಟುವುದೂ ಉಂಟು. ಕೆಮ್ಮು ಮತ್ತು ಕಫ ಉಪರಿಸೋಂಕಿದ್ದರೆ ಮಾತ್ರ ಕಂಡು ಬರುತ್ತವೆ.
(ಎ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ